ಎಲ್ವುಡ್, ಚಾರಲ್ಸ್‌ ಎ: 1873-1946. ಅಮೆರಿಕ ಸಂಯುಕ್ತ ಸಂಸ್ಥಾನದ ಮನೋವೈಜ್ಞಾನಿಕ ಸಮಾಜವಿಜ್ಞಾನದ ಪ್ರವರ್ತಕ. ಜನನ-ನ್ಯೂಯಾರ್ಕಿನ ದಕ್ಷಿಣಕ್ಕೆ ಸುಮಾರು 26 ಕಿಮೀ ದೂರದಲ್ಲಿರುವ ಆಗ್ಡೆನ್ಸ್‌ ಬರ್ಗ್ನಲ್ಲಿ, 1873ರ ಜನವರಿ 26ರಂದು. ಅಲ್ಲಿನ ಫ್ರಿ ಅಕೆಡಮಿಯಲ್ಲಿ ಚಿಕ್ಕಂದಿನ ವಿದ್ಯಾಭ್ಯಾಸ, ಅನಂತರ ಈತ ನ್ಯಾಯಶಾಸ್ತ್ರದ ಅಧ್ಯಯನ ಮಾಡುವ ಉದ್ದೇಶದಿಂದ ಕಾರ್ನೆಲ್ ವಿಶ್ವವಿದ್ಯಾಲಯವನ್ನು ಸೇರಿದ. ಅಲ್ಲಿ ಇವನಿಗೆ ಸುಪ್ರಸಿದ್ಧ ಸಮಾಜಶಾಸ್ತ್ರಜ್ಞ ಎಡ್ವರ್ಡ್ ಎ. ರಾಸನ ಪರಿಚಯ ವಾಯಿತು. ಆಗತಾನೇ ಆತ ತನ್ನ ಪಾಂಡಿತ್ಯವೃತ್ತಿಯ ಆರಂಭದೆಸೆಯಲ್ಲಿದ್ದು, ಅರ್ಥಶಾಸ್ತ್ರದ ಅಧ್ಯಾಪಕನಾಗಿದ್ದ. ರಾಸನ ಪ್ರಭಾವದಿಂದ ಎಲ್ವುಡ್ನ ಜೀವನದ ಗತಿಯೇ ಬದಲಾಯಿತು. ನ್ಯಾಯಶಾಸ್ತ್ರಾಭ್ಯಾಸದ ಯೋಚನೆ ಬಿಟ್ಟು ಈತ ಸಮಾಜವಿಜ್ಞಾನವನ್ನಭ್ಯಸಿ ಸುವ ಮನಸ್ಸು ಮಾಡಿದ. ಸಮಾಜವಿಜ್ಞಾನ ಅರ್ಥಶಾಸ್ತ್ರಗಳಲ್ಲಿ ವಿಶೇಷ ಜ್ಞಾನ ಸಂಪಾದಿಸಿ ಕೊಂಡ. ಜೊತೆಗೆ ಸಂಖ್ಯಾಶಾಸ್ತ್ರ, ಜನಾಂಕಶಾಸ್ತ್ರ (ಡಿಮಾಗ್ರಫಿ), ರಾಜ್ಯಶಾಸ್ತ್ರಗಳನ್ನೂ ಅಧ್ಯಯನ ಮಾಡಿದ. ಈ ನಾನಾ ಶಾಸ್ತ್ರಗಳನ್ನು ಈತನಿಗೆ ಬೋಧಿಸಿದವರೆಲ್ಲ ಸಮಾಜ ಸುಧಾರಣೆಯಲ್ಲಿ ಒಲವುಳ್ಳವರಾಗಿದ್ದದ್ದರಿಂದ ಎಲ್ವುಡ್ನೂ ಇದೇ ಬಗೆಯ ಒಲವು ತಳೆದು ಕೊಂಡ. ಜನಸಾಮಾನ್ಯರ ಸ್ಥಿತಿ ಸುಧಾರಣೆಯೇ ಸಮಾಜವಿಜ್ಞಾನದ ಗುರಿಯಾಗಿರಬೇಕೆಂಬುದಾಗಿ ಇವನಿಗೆ ಮನವರಿಕೆಯಾಯಿತು. ಈತ ಪದವೀಧರ ನಾದದ್ದು ಇದೇ ಕಾಲದಲ್ಲಿ (1896).

ಅನಂತರ ಎಲ್ವುಡ್ ಷಿಕಾಗೋ ವಿಶ್ವವಿದ್ಯಾಲಯಕ್ಕೆ ಹೋಗಿ ಅಲ್ಲಿ ಥಾಮಸ್, ಮೀಡ್, ಡ್ಯೂಯಿ ಇವರಲ್ಲಿ ಅಧ್ಯಯನ ಮುಂದುವರಿಸಿದ. ಸಾಮಾಜಿಕ ಮನೋವಿಜ್ಞಾನ, ವ್ಯಾವಹಾರಿಕ ತತ್ತ್ವಶಾಸ್ತ್ರ, ಸಮಾಜ ಸುಧಾರಣೆ-ಮುಂತಾದವು ಈತನ ವಿಶೇಷ ಸಂಶೋಧನೆಯ ವಿಷಯಗಳಾದವು. 1897-98ರಲ್ಲಿ ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ಐತಿಹಾಸಿಕ ಮತ್ತು ಸುಧಾರಣೀಯ ಅರ್ಥಶಾಸ್ತ್ರ, ತತ್ತ್ವಶಾಸ್ತ್ರ, ನೀತಿಶಾಸ್ತ್ರ- ಇವನ್ನು ಅಭ್ಯಾಸಮಾಡಿ ಮತ್ತೆ ಚಿಕಾಗೋಗೆ ಬಂದು ತನ್ನ ಪ್ರೌಢ ಪ್ರಬಂಧವಾದ ಸಂಪಾಲೆಗೊಮೆನ ಟು ಸೋಷಿಯಲ್ ಸೈಕಾಲೊಜಿಯನ್ನು ಸಿದ್ಧಪಡಿಸಿದ (1899). ಅಮೆರಿಕನ್ ಜರ್ನಲ್ ಆಫ್ ಸೋಷಿಯಾಲೊಜಿಯಲ್ಲಿ ಪ್ರಕಟವಾದ ಈ ಪ್ರಬಂಧ ಶುದ್ಧ ಮನೋವಿಜ್ಞಾನದ ತತ್ತ್ವಗಳ ಆಧಾರದ ಮೇಲೆ ಸಾಮಾಜಿಕ ಮನೋವಿಜ್ಞಾನದ ಪ್ರಥಮ ಪ್ರತಿಪಾದನೆ ಎನ್ನಬಹುದು.

ಮಿಸೂರಿ ವಿಶ್ವವಿದ್ಯಾಲಯದಲ್ಲಿ ಹೊಸದಾಗಿ ಸ್ಥಾಪಿತವಾದ ಸಮಾಜವಿಜ್ಞಾನ ಪ್ರಾಧ್ಯಾಪಕ ಹುದ್ದೆಯಲ್ಲಿ ಎಲ್ವುಡ್ ನೇಮಕವಾದ (1900). ಅಲ್ಲೇ ಮೂವತ್ತು ವರ್ಷಕಾಲ ಇದ್ದು, ಸಮರ್ಥ ಶಿಷ್ಯಾರನೇಕರನ್ನು ತಯಾರಿಸಿದ. ಇವರ ಪೈಕಿ ರಾಯಿಟರ್, ಬಾರ್ಡ್, ಬ್ಲೂಮರ್ ಇವರು ಮುಖ್ಯರು. ಎಲ್ವುಡ್ ಈ ವಿಶ್ವವಿದ್ಯಾಲಯವನ್ನು ಸೇರಿದಾಗ ಸಮಾಜವಿಜ್ಞಾನವನ್ನು ಅಧ್ಯಯನಕ್ಕಾಗಿ ಆಯ್ಕೆಮಾಡಿಕೊಂಡಿದ್ದವರು ಸುಮಾರು ಮೂವತ್ತು ಮಂದಿ ಮಾತ್ರ. ಇವನು ಈ ವಿಶ್ವವಿದ್ಯಾಲಯವನ್ನು ಬಿಡುವ ವೇಳೆಗೆ ಇಲ್ಲಿ 1,500 ವಿದ್ಯಾರ್ಥಿಗಳಿಗೆ ಅಧ್ಯಯನ ಸೌಲಭ್ಯವಿತ್ತು. ಡೂಕ್ ವಿಶ್ವವಿದ್ಯಾಲಯದಲ್ಲಿ ಸಮಾಜವಿಜ್ಞಾನದ ಇಲಾಖೆಯೊಂದನ್ನು ಹೊಸದಾಗಿ ತೆರೆದು ಅಭಿವೃದ್ಧಿಪಡಿಸಬೇಕೆಂದು ಆ ವಿಶ್ವವಿದ್ಯಾಲಯದಿಂದ 1930ರಲ್ಲಿ ಬಂದ ಆಹ್ವಾನದಂತೆ ಈತ ಅಲ್ಲಿಗೆ ಹೋಗಿ, ತನ್ನ ಅಂತ್ಯಕಾಲದವರೆಗೂ ಅಲ್ಲೇ ಇದ್ದ.

ಎಲ್ವುಡ್ 1912ರಲ್ಲಿ ಪ್ರಕಟಿಸಿದ ಸೋಷಿಯಾಲೊಜಿ ಇನ್ ಇಟ್ಸ್‌ ಸೈಕೊಲಾಜಿಕಲ್ ಆಸ್ಪೆಕ್ಟ್‌್ಸ ಎಂಬುದು ಮನೋವೈಜ್ಞಾನಿಕ ಸಮಾಜವಿಜ್ಞಾನ್ರದ ಕ್ಷೇತ್ರದಲ್ಲೊಂದು ಮಹತ್ತ್ವದ ಗ್ರಂಥ. ಮಾನವ ವರ್ತನೆಗೆ ಮನೋವೈಜ್ಞಾನಿಕ ವ್ಯಾಖ್ಯಾನದ ಪ್ರಯತ್ನವಾಗಿರುವ ಈ ಗ್ರಂಥದಲ್ಲಿ ವಿಕಾಸವಾದ, ಪ್ರಾಣಿವಿಜ್ಞಾನ, ನರರೋಗವಿಜ್ಞಾನ, ಕ್ರಿಯಾತ್ಮಕ ಮನೋವಿಜ್ಞಾನ, ಸಾಮಾಜಿಕ ಮನೋವಿಜ್ಞಾನ ಮುಂತಾದ ನಾನಾ ಕ್ಷೇತ್ರಗಳ ಸಂಗಮವಾಗಿದೆ. ಈಗ ಎಲ್ವುಡ್ನ ಗ್ರಂಥವನ್ನೂ ಮೀರಿಸಿದ ಕೃತಿಗಳು ಹಲವಾರಿವೆಯಾದರೂ ಆಗಿನ ಕಾಲದಲ್ಲಿ ಈ ಕ್ಷೇತ್ರದಲ್ಲಿ ಇದನ್ನು ಸರಿಗಟ್ಟುವ ಗ್ರಂಥ ಇನ್ನೊಂದಿರಲಿಲ್ಲ.

ಒಂದನೆಯ ಮಹಾಯುದ್ಧದ ಕಾಲದಿಂದೀಚೆ ಎಲ್ವುಡ್ ಧಾರ್ಮಿಕ ಹಾಗೂ ಸಾಂಸ್ಕೃತಿಕ ವಿಚಾರಗಳಲ್ಲಿ ಹೆಚ್ಚು ಆಸಕ್ತಿ ತಳೆದ. ಇವುಗಳ ಅಂತರಂಗಗಳನ್ನು ಬೆದಕಿ ನೋಡುವ ಪ್ರಸಕ್ತಿ ಬೆಳೆಯಿತು. ಆದ್ದರಿಂದ 1917ರಲ್ಲಿ ಇಂಟ್ರೊಡಕ್ಷನ್ ಟು ಸೋಷಿಯಲ್ ಸೈಕಾಲೊಜಿಯನ್ನೂ 1925ರಲ್ಲಿ ಸೈಕಾಲೊಜಿ ಆಫ್ ಹ್ಯೂಮನ್ ಸೊಸೈಟಿಯನ್ನೂ ಈತ ಬರೆದ. ಈ ಪುಸ್ತಕಗಳು ಈತನ ಹಿಂದಿನ ಪುಸ್ತಕದಷ್ಟು ಮಹತ್ತ್ವದವೆನ್ನಲಾಗುವುದಿಲ್ಲ. 1927ರಲ್ಲಿ ಎಲ್ವುಡ್ ಬರೆದ ಕಲ್ಚರಲ್ ಎವಲ್ಯೂಷನ್; ಎ ಸ್ಟೆಡಿ ಆಫ್ ಸೋಷಿಯಲ್ ಅರಿಜಿನ್ ಅಂಡ್ ಡೆವಲಪ್ಮೆಂಟ್ ಎಂಬ ಪುಸ್ತಕದಲ್ಲೂ ಸಾಂಸ್ಕೃತಿಕ, ಮಾನವಶಾಸ್ತ್ರದ ಪ್ರಾಮುಖ್ಯದ ಪ್ರತಿಪಾದನೆಯಿದೆ. ಸಾಮಾಜಿಕ ಪ್ರಕ್ರಿಯೆಗಳನ್ನು ಸಾಂಸ್ಕೃತಿಕ ಧಾರ್ಮಿಕ ದೃಷ್ಟಿಯಿಂದ ನೋಡುವ ಈ ಅಭ್ಯಾಸವನ್ನು ಎಲ್ವುಡ್ ತನ್ನ ಕೊನೆಗಾಲದವರೆಗೂ ಉಳಿಸಿಕೊಂಡಿದ್ದ. ಈ ಬಗೆಗೆ ಇನ್ನೊಂದು ಉದ್ಗ್ರಂಥವನ್ನೇ ಬರೆದು ಸಜ್ಜು ಪಡಿಸಿದ್ದ. ಆದರೆ ಅದು ಪ್ರಕಟವಾಗಲಿಲ್ಲ.

1933ರಲ್ಲಿ ಪ್ರಕಟವಾದ ಮೆಥಡ್ಸ್‌ ಇನ್ ಸೋಷಿಯಾಲೊಜಿ, ಎ ಕ್ರಿಟಿಕಲ್ ಸ್ಟಡಿ ಎಂಬುದು ಇನ್ನೊಂದು ಗಮನಾರ್ಹ ಗ್ರಂಥ. ಸಮಾಜವಿಜ್ಞಾನ ಕ್ಷೇತ್ರದಲ್ಲಿ ಆ ಕಾಲದಲ್ಲಿ ಪ್ರಚಲಿತವಿದ್ದ ಕೆಲವು ಅಪಾಯಕಾರಿ ಪ್ರವೃತ್ತಿಗಳನ್ನು ಎಲ್ವುಡ್ ಇಲ್ಲಿ ಎತ್ತಿ ತೋರಿಸಿದ್ದಾನೆ. ಸಮಾಜ ಸುರಕ್ಷೆ ಮತ್ತು ಸಾಮಾಜಿಕ ಮೌಲ್ಯಗಳ ನಿರಾಕರಣೆ, ಸಮಾಜಶಾಸ್ತ್ರದ ಅಧ್ಯಯನಕ್ಕೆ ಪ್ರಾಕೃತಿಕ ವಿಜ್ಞಾನ ವಿಧಾನಗಳ ಅನ್ವಯ ಮುಂತಾದವು ಸಮಾಜಶಾಸ್ತ್ರದ ನಿಜವಾದ ಸ್ವರೂಪವನ್ನು ಮಸಕುಮಾಡುವುವೆಂದು ಎಲ್ವುಡ್ ಈ ಪುಸ್ತಕದಲ್ಲಿ ಎಚ್ಚರಿಸಿದ್ದಾನೆ.

1910ರಲ್ಲಿ ಎಲ್ವುಡ್ ಸಮಾಜವಿಜ್ಞಾನವನ್ನು ಕುರಿತು ಬರೆದ ಪಠ್ಯ ಪುಸ್ತಕ ಆ ಬಗೆಯ ಪುಸ್ತಕಗಳಲ್ಲಿ ಬಲು ಪ್ರಸಿದ್ಧವಾದದ್ದು. ಎಲ್ವುಡ್ನಿಗೆ ಪ್ರಾಯೋಗಿಕ ಸಮಾಜವಿಜ್ಞಾನದಲ್ಲಿ ಎಷ್ಟೊಂದು ಆಸಕ್ತಿಯಿತ್ತೆಂಬುದನ್ನು ಇದು ತೋರಿಸುತ್ತದೆ. ಅನಂತರ ಎಲ್ವುಡ್ ಈ ಬಗೆಯ ಅನೇಕ ಪಠ್ಯ ಪುಸ್ತಕಗಳನ್ನು ಬರೆದ. ಸಾಮಾಜಿಕ ನೀತಿಶಾಸ್ತ್ರದಲ್ಲಿ ಈತ ತಳೆದಿದ್ದ ಆಸಕ್ತಿಯ ಫಲವಾಗಿ ಈ ಬಗ್ಗೆಯೂ ಅನೇಕ ಪುಸ್ತಕಗಳನ್ನು ಬರೆದ. ಬಾಲ್ಯದ ಧಾರ್ಮಿಕ ಅನುಭವಗಳಿಂದಾಗಿ ಈತನ ದೃಷ್ಟಿಯಲ್ಲಿ ಕ್ರೈಸ್ತಧರ್ಮಕ್ಕೆ ಹೆಚ್ಚಿನ ಪ್ರಾಶಸ್ತ್ಯವಿತ್ತು. ಧರ್ಮಪುನರ್ರಚನೆ, ಕ್ರೈಸ್ತಧರ್ಮ ಮತ್ತು ಸಮಾಜವಿಜ್ಞಾನ ಮುಂತಾದ ವಿಚಾರಗಳನ್ನು ಕುರಿತು ಎಲ್ವುಡ್ ಬರೆದ ಪುಸ್ತಕಗಳು ಬಲು ಜನಪ್ರಿಯವಾದವು.

ಅನಾರೋಗ್ಯದ ನಿಮಿತ್ತ ಎಲ್ವುಡ್ 1927ರಲ್ಲಿ ಮಿಸೂರಿ ವಿಶ್ವವಿದ್ಯಾಲಯದಿಂದ ರಜೆ ಪಡೆದು ಫ್ರಾನ್ಸ್‌, ಇಟಲಿ, ಆಸ್ಟ್ರಿಯ ಮುಂತಾದ ದೇಶಗಳಲ್ಲಿ ಸಂಚರಿಸಿ, ಅಲ್ಲಿಯ ಸಮಾಜಶಾಸ್ತ್ರಜ್ಞರ ಪರಿಚಯ ಮಾಡಿಕೊಂಡ. ಇದರಿಂದ ಇವನ ಅನುಭವ ಹೆಚ್ಚು ಆಳವಾಯಿತು. 1935ರಲ್ಲಿ ಈತ ವಿಶ್ವಸಮಾಜವಿಜ್ಞಾನಿಗಳ ಸಂಸ್ಥೆಯ ಅಧ್ಯಕ್ಷನಾಗಿ ಚುನಾಯಿತನಾದ.
ವಿಶ್ವದ ಎಲ್ಲ ದೇಶಗಳ ಸುರಕ್ಷತೆ ಆವಶ್ಯಕವೆಂದೂ ಅಂತಾರಾಷ್ಟ್ರೀಯ ಸಂಸ್ಥೆಗಳು ಇದಕ್ಕಾಗಿ ಶ್ರಮಿಸಬೇಕೆಂದೂ ಎಲ್ವುಡ್ ತನ್ನ ಕೊನೆಯ ದಿನಗಳಲ್ಲಿ ಸಾರಿದ. ಜನರೆಲ್ಲ ವಿದ್ಯಾವಂತರೂ ನಿಪುಣರೂ ದಾರಿದ್ರ್ಯದೂರರೂ ಆದಾಗ ಮಾತ್ರವೇ ಸುರಕ್ಷತೆ ಭದ್ರತೆಗಳು ಸಾಧ್ಯವೆಂಬುದು ಈತನ ದೃಢ ನಂಬಿಕೆಯಾಗಿತ್ತು. ಯುದ್ಧದಿಂದ ವಿಶ್ವದ ಹಿತಕ್ಕೆ ಧಕ್ಕೆಯೊದಗುವುದೆಂದೂ ಯುದ್ಧಕ್ಕೆ ಅಮೆರಿಕ ಪ್ರಚೋದನೆ ನೀಡಬಾರದೆಂದು ಎಲ್ವುಡ್ ವಿಶ್ರಾಂತ ಪ್ರಾಧ್ಯಾಪಕನಾಗಿ 1945ರಲ್ಲಿ ಸಾರಿದ. ಎಲ್ವುಡ್ 1946 ಸೆಪ್ಟೆಂಬರ್ 25ರಂದು ನಿಧನನಾದ.
ಅಮೆರಿಕನ್ ಸಮಾಜವಿಜ್ಞಾನಿಗಳ ಪೈಕಿ ಎಲ್ವುಡ್ ವಿಶಿಷ್ಟ ಸ್ಥಾನ ಗಳಿಸಿಕೊಂಡಿದ್ದಾನೆ. ಮನೋವಿಜ್ಞಾನಕ್ಕೂ ಸಮಾಜವಿಜ್ಞಾನಕ್ಕೂ ಸ್ಥಿರವಾದ ಸೇತುವೆ ನಿರ್ಮಿಸಿದವ ಎಲ್ವುಡ್ ಎನ್ನಬಹುದು. ಈ ಎರಡು ವಿಷಯಗಳಲ್ಲೂ ತಕ್ಕಮಟ್ಟಿನ ಸಾಮಥರ್ಯ್‌ ಗಳಿಸಿಕೊಂಡಿದ್ದ ಎಲ್ವುಡ್ ಈ ಕೆಲಸವನ್ನು ಇತರ ಎಲ್ಲರಿಗಿಂತ ಹೆಚ್ಚು ಸಮರ್ಪಕವಾಗಿ ಮಾಡಿದ. ಸಮಾಜ ಸುಧಾರಣೆ ಸುರಕ್ಷೆಗಳಲ್ಲೂ ಇವನಿಗೆ ಹೆಚ್ಚಿನ ಆಸಕ್ತಿಯಿತ್ತು. ಸಾಮಾಜಿಕ ನಿರ್ದೇಶನದಲ್ಲಿ ಆಧುನಿಕ ಧರ್ಮ ಹೆಚ್ಚಿನ ಪಾತ್ರವಹಿಸ ಬೇಕೆಂಬುದು ಇವನ ನಂಬಿಕೆ. ವಿಶ್ವಸಂಸ್ಥೆಯ ಮೂಲಕ ವಿಶ್ವಶಾಂತಿ ಸ್ಥಾಪನೆ ಮಾಡದೆ ಶಾಶ್ವತ ಪ್ರಜಾಪ್ರಭುತ್ವವಾದಿ ಸಮಾಜದ ಸ್ಥಾಪನೆಯಾಗಲಿ ಸಾಮಾಜಿಕ ಆದರ್ಶರಾಜ್ಯದ ರಚನೆಯಾಗಲಿ ಸಾಧ್ಯವಿಲ್ಲವೆಂದೂ ಎಲ್ವುಡ್ ದೃಢವಾಗಿ ನಂಬಿದ್ದ.   (ಕೆ.ಎನ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ